ಮೂವತ್ತು ವರ್ಷಗಳ ಯುದ್ಧ - 
1618-48. ಧಾರ್ಮಿಕ ಹಕ್ಕು ಬಾಧ್ಯತೆಗಳಿಗಾಗಿ ಮತ್ತು ಶಕ್ತಿ ಸಮತೋಲನಕ್ಕಾಗಿ ಯುರೋಪಿನಲ್ಲಿ ಮೂವತ್ತು ವರ್ಷಗಳ ಕಾಲ ನಡೆದ ಯುದ್ಧ. ಜರ್ಮನಿಯ ಪ್ರಾಟೆಸ್ಟಂಟ್ ಮತ್ತು ರೋಮನ್ ಕ್ಯಾತೊಲಿಕರ ನಡುವಿನ ಅಂತರ್ಯುದ್ಧವಾಗಿ ಪ್ರಾರಂಭವಾದ ಈ ಯುದ್ಧ ಮುಂದೆ ರಾಜ್ಯ ಹಾಗೂ ರಾಜಕೀಯ ಶಕ್ತಿಗಳಿಕೆಗಾಗಿ ನಡೆಯಿತು. ವೆಸ್ಟ್‍ಫಾಲೀಯ ಒಪ್ಪಂದದಲ್ಲಿ ಪರ್ಯವಸಾನಗೊಂಡ ಈ ಯುದ್ಧ ಆಧುನಿಕ ಯುರೋಪಿನ ಧಾರ್ಮಿಕ ಮತ್ತು ರಾಜಕೀಯ ಬೆಳೆವಣಿಗೆಗಳಿಗೆ ಬುನಾದಿಯಾಯಿತು.

	ಕಾರಣಗಳು : ಜರ್ಮನಿಯ ಪ್ರಾಟೆಸ್ಟಂಟರು ಮತ್ತು ಕ್ಯಾತೊಲಿಕರ ನಡುವಿನ ವೈರತ್ವ ದೀರ್ಘ ಕಾಲದ್ದು. ಜರ್ಮನಿಯ ಧಾರ್ಮಿಕ ವಿವಾದವನ್ನು ಬಗೆಹರಿಸುವ ಸಲುವಾಗಿ ಆದ ಆಗ್ಸ್‍ಬರ್ಗ್ (1555) ಒಪ್ಪಂದದ ಬಗ್ಗೆ ಉಭಯತ್ರರಿಗೂ ಸಮಾನಾಭಿಪ್ರಾಯವಿರಲಿಲ್ಲ. ಎರಡೂ ಪಂಥಗಳು ಈ ಒಪ್ಪಂದವನ್ನು ಉಲ್ಲಂಘಿಸಿದುವು. ಒಪ್ಪಂದಕಾಲದಲ್ಲಿ ಕ್ಯಾಲ್ವಿನಿಸ್ಟರನ್ನು ಕಡೆಗಣಿಸಿದ್ದರಿಂದ ಅವರೂ ಕ್ಯಾತೊಲಿಕರೊಂದಿಗೆ ಘರ್ಷಣೆಗಿಳಿದರು.

	ಈ ಧಾರ್ಮಿಕ ಭಿನ್ನಾಭಿಪ್ರಾಯಗಳು ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳೊಂದಿಗೆ ಹೆಣೆದುಕೊಂಡಿದ್ದುವು. ಜರ್ಮನ್ ರಾಜರು ಚಕ್ರವರ್ತಿಯ ಯಾವುದೇ ಅಧಿಕಾರ ವಿಸ್ತರಣೆಯನ್ನು ವಿರೋಧಿಸುತ್ತಿದ್ದರು. ಸ್ಪೇನ್ ಪವಿತ್ರ ರೋಮನ್ ಸಾಮ್ರಾಜ್ಯದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಯುರೋಪಿನಲ್ಲಿ ತನ್ನ ರಾಜಕೀಯ ಹಿತಾಸಕ್ತಿಗಳನ್ನು ವಿಸ್ತರಿಸಿಕೊಳ್ಳುವ ಸಲುವಾಗಿ ಫ್ರಾನ್ಸ್ ಮತ್ತು ಸ್ವೀಡನ್‍ನ ಸರಹದ್ದುಗಳವರೆಗೆ ಅದರ ಸೈನ್ಯಗಳು ಪ್ರವೇಶಿಸಿ ಹಸ್ತಕ್ಷೇಪ ನಡೆಸುತ್ತಿದ್ದುವು. ಈ ವಿಸ್ತರಣೆಯನ್ನು ವಿರೋಧಿಸುವ ಮತ್ತು ಸಾಮ್ರಾಜ್ಯದ ಪ್ರಭಾವವನ್ನು ತಗ್ಗಿಸುವ ಉದ್ದೇಶ ಹೊಂದಿದ್ದ ಫ್ರಾನ್ಸ್. ಬೊಹಿಮಿಯ ಮತ್ತು ಸ್ವೀಡನ್‍ಗಳು ಜರ್ಮನಿ ರಾಜ್ಯಗಳ ರಾಜಕೀಯ ವ್ಯವಹಾರಗಳಲ್ಲಿ ಪ್ರವೇಶಿಸಿದುವು. ಪ್ರಾಟೆಸ್ಟಂಟರ ಹಿತಕಾಯುವ ಕಾಳಜಿ ಹೊಂದಿದ್ದ ಗ್ರೇಟ್ ಬ್ರಿಟನ್ ಮತ್ತು ತನ್ನ ನೆರೆಯ ಪ್ರದೇಶಗಳ ಹಿತಾಸಕ್ತಿ ಹೊಂದಿದ್ದ ರಷ್ಯ ಸಹ ಈ ಯುದ್ಧದಲ್ಲಿ ಪಾತ್ರ ವಹಿಸಿದುವು. ಧಾರ್ಮಿಕ ಪ್ರಶ್ನೆಯಾಗಿ ಪ್ರಾರಂಭವಾದ ಈ ಯುದ್ಧ ಮುಂದೆ ರಾಜಕೀಯ ಮತ್ತು ಆರ್ಥಿಕ ಪ್ರಾಮುಖ್ಯ ಪಡೆಯಿತು. ಸುಮಾರು 1610ರಿಂದ 1660ರ ತನಕ ನಡೆದ ಯುರೋಪಿಯನ್ ರಾಜ್ಯಗಳ ಪರಸ್ಪರ ಬಲ ಸಮತೋಲನೆಯ ಘರ್ಷಣೆಯ ಕಾಲದ ಒಂದು ಭಾಗವೆಂದು ಮೂವತ್ತು ವರ್ಷಗಳ ಯುದ್ಧವನ್ನು ಹೇಳುತ್ತಾರೆ.

	ಘಟನಾವಳಿಗಳು : ಬೊಹಿಮಿಯ ಮತ್ತು ಪಾಲಟೈನ್ ಯುದ್ಧ (1618-23): 1608ರಲ್ಲಿ ಪ್ರಾಟೆಸ್ಟಂಟರು ಕ್ಯಾಲ್ವಿನ್ ಮತದ ಅನುಯಾಯಿಯಾಗಿದ್ದ ಪಲ್ಯಾಟಿನೇಟ್‍ನ ನಾಲ್ಕನೆಯ ಫ್ರೆಡ್ರಿಕ್‍ನ ನೇತೃತ್ವದಲ್ಲಿ ಎವಾಂಜೆಲಿಕಲ್ ಯೂನಿಯನ್ ರಕ್ಷಣಾ ಒಕ್ಕೂಟ ಸ್ಥಾಪಿಸಿಕೊಂಡರು. ಇದಕ್ಕೆ ಪ್ರತಿಯಾಗಿ 1609ರಲ್ಲಿ ಬವೇರಿಯದ ಮ್ಯಾಕ್ಸಿಮಿಲಿಯನ್ನನ ನೇತೃತ್ವದಲ್ಲಿ ಕ್ಯಾತೊಲಿಕರು ಪವಿತ್ರ ಲೀಗನ್ನು ಸ್ಥಾಪಿಸಿದರು. ಪ್ರೇಗ್‍ನ ಆರ್ಚ್‍ಬಿಷಪ್ ಪ್ರಾಟೆಸ್ಟಂಟರ ಚರ್ಚೊಂದನ್ನು ನಾಶಮಾಡಲು ಆದೇಶ ನೀಡಿದಾಗ ಯುದ್ಧದ ಕಿಡಿ ಹಾರಿತು. ಪ್ರಾಟೆಸ್ಟಂಟರು ಚಕ್ರವರ್ತಿಗೆ ಮೊರೆಹೋದರು. ಅದು ಫಲಕಾರಿಯಾಗದಿದ್ದಾಗ ದಂಗೆಯೆದ್ದರು. ಆಗಿನಿಂದ ಎರಡೂ ಪಂಥಗಳು ಆಗಾಗ ಘರ್ಷಣೆಗೆ ಇಳಿಯಲಾರಂಭಿಸಿದುವು. ಬೊಹಿಮಿಯದಲ್ಲಿ ಪ್ರಾರಂಭವಾದ ಅಂತರ್ಯುದ್ಧ ಪಶ್ಚಿಮ ಯುರೋಪಿನಾದ್ಯಂತ ಹರಡಿತು. ಬೊಹಿಮಿಯಾ ಮತ್ತು ಆಸ್ಟ್ರಿಯದ ಎಸ್ಟೇಟುಗಳು ಭಾವಿ ಚಕ್ರವರ್ತಿ ಎರಡನೆಯ ಫರ್ಡಿನ್ಯಾಂಡ್‍ನ ವಿರುದ್ಧ ದಂಗೆಯೆದ್ದುವು.

	1619ರಲ್ಲಿ ಬೊಹಿಮಿಯನ್ ನೊಬೆಲ್ಲರು ಕ್ಯಾತೊಲಿಕ್‍ರಾಜ ಫರ್ಡಿನ್ಯಾಂಡನನ್ನು ಪದಚ್ಯುತಿಗೊಳಿಸಿ ಅವನ ಸ್ಥಾನದಲ್ಲಿ ಪಲ್ಯಾಟಿನೇಟ್‍ನ ಎಲೆಕ್ಟರ್ ಐದನೆಯ ಫ್ರೆಡ್ರಿಕ್‍ನನ್ನು ತಮ್ಮ ರಾಜನನ್ನಾಗಿ ಚುನಾಯಿಸಿದರು. ಆದರೆ ಪ್ರಾಟೆಸ್ಟಂಟ್ ನೊಬೆಲ್ಲರು ನೀರಿಕ್ಷಿಸಿದ್ದಂತೆ ಬ್ರಿಟನ್ನಿನ ಅಥವಾ ಇತರ ರಾಷ್ಟ್ರಗಳ ನೆರವು ಒದಗಲಿಲ್ಲ. ರೋಮನ್ ಚಕ್ರವರ್ತಿ ಮತ್ತು ಲೀಗಿನ ಬೆಂಬಲದಿಂದ ಫರ್ಡಿನ್ಯಾಂಡ್ ಬೊಹಿಮಿಯದ ನೊಬೆಲ್ಲರ ಮೇಲೆ ಬಿದ್ದ. ದಂಡನಾಯಕ ಟಿಲ್ಲಿಯ ನೇತೃತ್ವದ ಸೈನ್ಯ 1620 ನವೆಂಬರ್ 8ರಂದು ಪ್ರೇಗ್ ಬಳಿಯ ವೈಟ್ ಮೌಂಟನ್ ಯುದ್ಧದಲ್ಲಿ ಪ್ರಾಟೆಸ್ಟಂಟರನ್ನು ಸೋಲಿಸಿತು. ಫ್ರೆಡ್ರಿಕ್ ಹಾಲಂಡಿಗೆ ಪಲಾಯನ ಮಾಡಿದ. ಟಿಲ್ಲಿ 1622 ಅಕ್ಟೋಬರ್ 25ರಂದು ಗ್ಲಾಟ್ಸ್‍ನ್ನು ವಶಪಡಿಸಿಕೊಳ್ಳುವ ಮೂಲಕ ಬೊಹಿಮಿಯನ್ನರನ್ನು ಸಂಪೂರ್ಣ ಅಧೀನಕ್ಕೊಳಪಡಿಸಿದ. ಇದರಿಂದಾಗಿ ಪ್ರಾಟೆಸ್ಟಂಟ್ ದಂಗೆ ಅಡಗಿಹೋಗಿ ಕ್ಯಾತೊಲಿಕ್ ಮತ ಮತ್ತೆ ರಾಜ್ಯಧರ್ಮವಾಯಿತು. ಚಕ್ರವರ್ತಿ ಮ್ಯಾಥಿಯಸ್ ಮೃತನಾದಾಗ ಎರಡನೆಯ ಫರ್ಡಿನ್ಯಾಂಡ್ ಪವಿತ್ರ ರೋಮನ ಸಾಮ್ರಾಜ್ಯದ ಚಕ್ರವರ್ತಿಯಾದ.

	ಲಕ್ಸಂಬರ್ಗ್ ಮತ್ತು ಫ್ರಾನೆಕಾಮ್ಟೆ ಪ್ರದೇಶದ ಮೇಲೆ ಪರಮಾಧಿಕಾರ ಸ್ಥಾಪಿಸಿದ್ದ ಸ್ಪೇನಿನವರೊಂದಿಗೆ ಸೇರಿಕೊಂಡ ಟಿಲ್ಲಿ ಬವೇರಿಯದ ಉತ್ತರಕ್ಕೆ ಮತ್ತು ಬೊಹಿಮಿಯದ ಪಶ್ಚಿಮಕ್ಕೆ ಇರುವ ಮೇಲಣ ಪಲ್ಯಾಟಿನೇಟನ್ನು ವಶಪಡಿಸಿಕೊಂಡ. ಟಿಲ್ಲಿ ಮುಂದುವರಿದು ಜರ್ಮನ್ ಪ್ರಾಟೆಸ್ಟಂಟ್‍ರಾದ ಅರ್ನ್‍ಸ್ಟವೋನ್ ಮ್ಯಾನ್ಸ್‍ಫೀಲ್ಡ್ ಮತ್ತು ಬ್ರನ್ಸ್‍ವಿಕ್‍ನ ನಾಯಕರನ್ನು ಸೋಲಿಸಿದ. 1621ನೆಯ ಮೇನಲ್ಲಿ ಪ್ರಾಟೆಸ್ಟಂಟ್ ಒಕ್ಕೂಟ ತಾನಾಗಿಯೇ ವಿಸರ್ಜನೆಗೊಂಡಿತು. ಬ್ರನ್ಸ್‍ವಿಕ್‍ನ ಕ್ರಿಶ್ಚಿಯನ್‍ನನ್ನು ಸ್ಟಾಟ್‍ಲೋನ್ ಬಳಿ ಟಿಲ್ಲಿ ಸೋಲಿಸಿದ (1623 ಆಗಸ್ಟ್ 6). ಬವೇರಿಯದ ಮ್ಯಾಕ್ಸಿಮಿಲಿಯನ್ ಎಲೆಕ್ಟರ್ ಆಗಿದ್ದು ದಕ್ಷಿಣ ಮತ್ತು ವಾಯುವ್ಯ ಜರ್ಮನಿಯಲ್ಲಿ ಪ್ರಮುಖ ಶಕ್ತಿಯಾಗಿ ಬೆಳೆದ. ಸ್ಪೇನಿನವರು ರ್ಹೇನಿಷ್ ಪಲ್ಯಾಟಿನೇಟ್‍ನ ಸ್ವಾಧೀನ ಪಡೆದರು ಮತ್ತು ಫ್ರೆಡರಿಕ್ ದೇಶಭ್ರಷ್ಟನಾದ. ಕ್ಯಾತೊಲಿಕರ ಈ ಅದ್ಭುತ ವಿಜಯ ಪ್ರಾಟೆಸ್ಟಂಟರನ್ನು ದಿಗ್ಭ್ರಾಂತಗೊಳಿಸಿತು. ಆಗ ಯುರೋಪಿನ ಎಲ್ಲ ಪ್ರಮುಖ ರಾಷ್ಟ್ರಗಳು ಇತ್ತ ಗಮನ ಹರಿಸಿದವು. ಹಾಲಂಡ್ ಮತ್ತು ಇಂಗ್ಲೆಂಡ್‍ಗಳು ಕ್ಯಾತೊಲಿಕರ ಮೇಲುಗೈ ತಪ್ಪಿಸಲು ಪ್ರಯತ್ನಶೀಲವಾದುವು. ಪ್ರಾಟೆಸ್ಟಂಟ್ ರಾಷ್ಟ್ರವಲ್ಲದ ಫ್ರಾನ್ಸ್ ಸಹ ಸ್ಪೇನ್ ಮತ್ತು ಚಕ್ರವರ್ತಿಯ ಮೇಲುಗೈಯನ್ನು ಮುರಿಯುವ ಸಲುವಾಗಿ ಡೆನ್ಮಾರ್ಕಿನ ದೊರೆ ನಾಲ್ಕನೆಯ ಕ್ರಿಶ್ಚಿಯನ್ನನಿಗೆ ಬೆಂಬಲ ನೀಡಿ ಪ್ರಾಟೆಸ್ಟಂಟ್‍ರನ್ನು ಬೆಂಬಲಿಸಿತು. ಇದರಿಂದಾಗಿ ಮೂವತ್ತು ವರ್ಷಗಳ ಯುದ್ಧ ಹೆಚ್ಚು ಜಟಿಲವಾಯಿತು.

	ಗ್ರೌಬಿನ್‍ಡನ್ ಹೋರಾಟ : ಸ್ಪೇನ್ ಮತ್ತು ಆಸ್ಟ್ರಿಯಗಳು ಯೂನಿಯನ್ನಿನ ಪ್ರದೇಶಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅಪೇಕ್ಷಿಸಿದಾಗ ಫ್ರಾನ್ಸ್ ಮತ್ತು ವೆನಿಸ್ ಇದನ್ನು ವಿರೋಧಿಸಿದುವು. ಫ್ರಾನ್ಸ್‍ನ ಪ್ರಧಾನಿ ರಿಸûಲೂ ಮೊದಲಬಾರಿಗೆ (1624-26) ಗ್ರೌಬಿನ್‍ಡನ್‍ನನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ. ಆದರೆ ಫ್ರಾನ್ಸಿನ ಆಂತರಿಕ ಸಮಸ್ಯೆಗಳಿಂದಾಗಿ ಅದು ನೆರವೇರಲಿಲ್ಲ. ಅಂತಿಮವಾಗಿ ಮಾಂಟ್ಸ ಒಪ್ಪಂದದಿಂದಾಗಿ (1626) ಗ್ರೌಬಿನ್‍ಡನ್ ಪೋಪ್‍ನ ಪಡೆಗಳ ವಶದಲ್ಲಿರುವ ಫ್ರಾಂಕೋ-ಸ್ಪ್ಯಾನಿಷ್ ರಕ್ಷಿತ ರಾಜ್ಯವಾಯಿತು. ಆದರೆ ಹಾಬ್ಸ್‍ಬರ್ಗರು ಆ ಪ್ರದೇಶವನ್ನು ಮತ್ತೆ ಆಕ್ರಮಿಸಿಕೊಂಡು (1629-31) ಮುಂದೆ ವಿವಿಧ ಆಳ್ವಿಕೆಗೊಳಪಟ್ಟ ಗ್ರೌಬಿನ್‍ಡನ್ ಅನಂತರದ ಒಪ್ಪಂದದ ಮೇರೆಗೆ ಸಂಪೂರ್ಣ ಸ್ವಾತಂತ್ರ್ಯ ಪಡೆಯಿತು.

	ಸ್ವೀಡಿಷ್-ಪೋಲಿಷ್ ಯುದ್ಧ (1621-29) : ಸ್ವೀಡನ್‍ನಲ್ಲಿ ಹದಿನೇಳನೆಯ ಶತಮಾನದ ಪ್ರಥಮ ಪಾದದಲ್ಲಿ ಗುಸ್ಟಾವಸ್ ಅಡಾಲ್ಫಸನ ನೇತೃತ್ವದಲ್ಲಿ ಬಲಿಷ್ಠವಾದ ಸೈನ್ಯ ನಿರ್ಮಾಣವಾಯಿತು. ಮಹತ್ತ್ವಾಕಾಂಕ್ಷಿಯಾಗಿದ್ದ ಹಾಗೂ ಪ್ರಾಟೆಸ್ಟಂಟರ ಪರವಾಗಿದ್ದ ಗುಸ್ಟಾವಸ್, ಬಾಲ್ಟಿಕ್ ಸಮುದ್ರವನ್ನು ಸ್ವೀಡನ್ನಿನ ಸರೋವರವನ್ನಾಗಿ ಮಾಡಬೇಕೆಂದು ಕನಸುಕಾಣುತ್ತಿದ್ದ. ಈತ ಸ್ಟಲ್‍ಬೋವ ಮತ್ತು ಕರೀಲಿಯಗಳನ್ನು ಪಡೆದು ಫಿನ್‍ಲೆಂಡ್ ಕೊಲ್ಲಿಯ ಮೇಲೆ ನಿಯಂತ್ರಣ ಪಡೆದ. ಅನಂತರ ಪೋಲೆಂಡ್ ಮೇಲೆ ದಂಡಯಾತ್ರೆ ಕೈಗೊಂಡ. ಲಿವೋನಿಯದ ಮೇಲೆ ದಂಡೆತ್ತಿ ಹೋಗಿ ಬಾಲ್ಟಿಕ್‍ನ ಮುಖ್ಯ ಬಂದರಾದ ರೀಗವನ್ನೂ ಪೋಲೆಂಡ್‍ನ ಸಾಮಂತನಿಂದ ಮೆಮೆಲ್ ಮತ್ತು ಪಿಲೋ ಬಂದರುಗಳನ್ನೂ ಗೆದ್ದುಕೊಂಡ. ಆದರೂ ಬಾಲ್ಟಿಕ್‍ನಲ್ಲಿ ಡೇನಿಷ್‍ಯುದ್ಧದಿಂದಾಗಿ ಸ್ವೀಡನ್ ಅಪಾಯಕ್ಕೆ ಸಿಕ್ಕಿಕೊಂಡಿತು.

	ಆಸ್ಟ್ರಿಯದ ಪ್ರಧಾನ ದಂಡನಾಯಕ ವಾಲೆನ್‍ಸ್ಟೈನ್ ಮೆಕ್‍ಲೆನ್‍ಬರ್ಗನ್ನು ಗೆದ್ದುಕೊಂಡ ಹಾಗೂ ಪೊಮೆರೆನೀಯವನ್ನು ಗೆಲ್ಲುವ ಭರವಸೆ ತೋರಿದ. ಕೊನೆಗೆ ಫ್ರಾನ್ಸ್‍ನ ಮಧ್ಯಸ್ಥಿಕೆಯಿಂದಾಗಿ ಸ್ವೀಡನ್ ಮತ್ತು ಪೋಲೆಂಡ್‍ಗಳ ನಡುವೆ 1629 ಸೆಪ್ಟೆಂಬರ್ 25ರಂದು ಅಲ್ಟ್‍ಮಾರ್ಕ್ ಒಪ್ಪಂದವಾಯಿತು. ಲಿವೋನಿಯ ಮತ್ತು ಪ್ರಷ್ಯನ್ ಬಂದರುಗಳು ಸ್ವೀಡನ್‍ನ ಸ್ವಾಧೀನದಲ್ಲಿ ಉಳಿದವು.

	ಡೇನಿಷ್ ಯುದ್ಧ (1625-29) : ಬೊಹಿಮಿಯನ್ ಯುದ್ಧಕಾಲದಲ್ಲಿ ಡೆನ್‍ಮಾರ್ಕ್‍ನ 4ನೆಯ ಕ್ರಿಶ್ಚಿಯನ್ ಕಟ್ಟುನಿಟ್ಟಾದ ತಾಟಸ್ಥ್ಯವನ್ನು ಪಾಲಿಸಿದ. ಅನಂತರ ಸಂದರ್ಭದ ಪ್ರಯೋಜನ ಪಡೆಯಲು ಅವನು ಸಂಘರ್ಷಕ್ಕಿಳಿಯಲು ನಿರ್ಧರಿಸಿದ. ಡೆನ್ಮಾರ್ಕ್ ಒಂದೆಡೆ ಬಾಲ್ಟಿಕ್ ಪ್ರದೇಶದಲ್ಲಿ ಸ್ವೀಡನ್‍ನ ಪ್ರಭಾವವನ್ನು ತಗ್ಗಿಸುವ ಹಾಗೂ ಮತ್ತೊಂದೆಡೆ ಸಾಮ್ರಾಜ್ಯದ ಪ್ರಾಟೆಸ್ಟಂಟ್ ವಿರೋಧಿ ನೀತಿಯನ್ನು ವಿರೋಧಿಸುವ ಗುರಿಯನ್ನು ಹೊಂದಿತ್ತು. ಹೇಗ್ ಒಪ್ಪಂದದ (1625 ಡಿಸೆಂಬರ್ 9) ಸಮಾಲೋಚನೆಯಲ್ಲಿ ಪ್ರಮುಖ ಪಾತ್ರವಹಿಸಿದ ಬ್ರಿಟಿಷ್ ಧುರೀಣ ಜಾರ್ಜ್ ವಿಲಿಯರ್ಸ್ ಪ್ರಾಟೆಸ್ಟಂಟ್ ಒಕ್ಕೂಟದ ಪುನರ್ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ. ತುರ್ಕಿ ಮತ್ತು ಫ್ರಾನ್ಸ್‍ಗಳಂಥ ಪ್ರಾಟೆಸ್ಟಂಟೇತರ ರಾಷ್ಟ್ರಗಳ ಸಹಾನುಭೂತಿಯೂ ಒಕ್ಕೂಟಕ್ಕೆ ದೊರೆಯುವಂತೆ ಮಾಡಿದ.

	ಪ್ರಾಟೆಸ್ಟಂಟ್ ರಾಜರಲ್ಲಿ ಪ್ರಮುಖನಾಗಿದ್ದ ಡೆನ್ಮಾರ್ಕ್‍ನ ನಾಲ್ಕನೆಯ ಕ್ರಿಶ್ಚಿಯನ್ ದಕ್ಷಿಣ ಜರ್ಮನಿಯ ಕಡೆ ತನ್ನ ಸೈನ್ಯ ತಂದ. ವಾಲೆನ್‍ಸ್ಟೈನ್‍ನಿಂದ ಸಂಘಟಿತವಾದ ಲೀಗಿನ ಸೈನ್ಯ ಟಿಲ್ಲಿಯ ದಂಡನಾಯಕತ್ವದಲ್ಲಿ ಕ್ರಿಶ್ಚಿಯನ್ನನನ್ನೂ ಎದುರಿಸಿತು. ಟಿಲ್ಲಿಯ ಪಡೆಗಳು ಡೇನಿಷ್ ಸೈನ್ಯವನ್ನು ಮತ್ತೆ ಮತ್ತೆ ಸೋಲಿಸಿದುವು. ಲುಟ್ಟರ್‍ನಲ್ಲಿ 1626 ಆಗಸ್ಟ್ 27ರಂದು ನಡೆದ ಯುದ್ಧದಲ್ಲಿ ಡೇನಿಷ್ ಸೈನ್ಯ ಸೋಲನ್ನನುಭವಿಸಿತು. 1629ರಲ್ಲಿ ಲುಬೆತ್ ಒಪ್ಪಂದವಾಯಿತು. ನಾಲ್ಕನೆಯ ಕ್ರಿಶ್ಚಿಯನ್ ಷ್ಲೇಸ್‍ವಿಗ್ ಮತ್ತು ಹೋಲ್‍ಸ್ಟೈನ್‍ಗಳನ್ನು ಹೊರತುಪಡಿಸಿ ತಾನು ವಶಪಡಿಸಿಕೊಂಡಿದ್ದ ಪ್ರದೇಶವನ್ನೆಲ್ಲ ಬಿಟ್ಟುಕೊಡಬೇಕಾಯಿತು. ಒಕ್ಕೂಟದ ಈ ಸೋಲಿನಿಂದಾಗಿ ಸಾಮ್ರಾಜ್ಯದ ಪ್ರಭಾವ ಅತ್ಯುನ್ನತ ಸ್ಥಿತಿಗೇರಿತು. ಇಲ್ಲಿಗೆ ಯುದ್ಧದ ಎರಡನೆಯ ಹಂತ ಮುಗಿಯಿತು.

	ನಷ್ಟಭರ್ತಿ ಶಾಸನ (1629) : ಎರಡನೆಯ ಫರ್ಡಿನ್ಯಾಂಡ್ 1629 ಮಾರ್ಚ್ 6ರಂದು ನಷ್ಟಭರ್ತಿ ಶಾಸನ ಹೊರಡಿಸಿದ. ಶಾಸನದ ಮೇರೆಗೆ 1552ರಿಂದ ಅಂದರೆ ಪ್ರಾಟೆಸ್ಟಂಟ್ ಮತ ಸ್ಥಾಪನೆಯಾದಂದಿನಿಂದ ಪ್ರಾಟೆಸ್ಟಂಟರ ವಶವಾಗಿದ್ದ ಕ್ಯಾತೊಲಿಕರ ಸ್ವತ್ತೆಲ್ಲವನ್ನು ಪುನಃ ಅವರಿಗೆ ವಾಪಸ್ಸು ಬಿಟ್ಟು ಕೊಡಬೇಕಾಗಿತ್ತು. ಪ್ರಾಟೆಸ್ಟಂಟರು ತಮ್ಮೆಲ್ಲ ಶಕ್ತಿ, ಕೋಪತಾಪಗಳಿಂದ ಈ ಶಾಸನವನ್ನು ವಿರೋಧಿಸತೊಡಗಿದರು. ರೇಗನ್ಸ್‍ಬರ್ಗನ ಡಯಟ್ ಸಭೆಯಲ್ಲಿ (1630) ಲ್ಯೂಥರ್‍ವಾದಿ ಸ್ಯಾಕ್ಸೋನಿ ಮತ್ತು ಕ್ಯಾತೊಲಿಕ್ ಬವೇರಿಯಗಳು ವಾಲೆನ್‍ಸ್ಟೈನ್‍ನನ್ನು ವಜಾ ಮಾಡುವಂತೆ ಸಾಮ್ರಾಟನನ್ನು ಒತ್ತಾಯಿಸಿದುವು. ಫ್ರಾನ್ಸ್‍ನ ರಿಸೆûಲೂ ಸಾಮ್ರಾಟನ ವಿರೋಧಿಗಳಿಗೆ ಒತ್ತಾಸೆ ನೀಡಿದ.

	ಮಾಂಟುವ ಉತ್ತರಾಧಿಕಾರ ಪ್ರಶ್ನೆ (1628-31) : ಮಾಂಟುವದ ಡ್ಯೂಕ್ 1627ರಲ್ಲಿ ನಿಧನನಾದ. ಈ ಸ್ಥಾನವನ್ನು ಭರ್ತಿಮಾಡುವ ವಿಚಾರದಲ್ಲಿ ಫ್ರಾನ್ಸ್ ಮತ್ತು ರೋಮನ್ ಸಾಮ್ರಾಜ್ಯದ ನಡುವೆ ನೇರ ಸಂಘರ್ಷವುಂಟಾಯಿತು. ಫ್ರಾನ್ಸ್ ಇದರಲ್ಲಿ ಮೇಲುಗೈ ಸಾಧಿಸಿತು. ಹಾಬ್ಸ್‍ಬರ್ಗ್ ಪಡೆಗಳು ಕಾಸಾಲ್‍ನಿಂದ 1630ರ ಅಕ್ಟೋಬರ್‍ನಲ್ಲಿ ಹಿಂದಕ್ಕೆ ಸರಿದುವು. ರಿಸೆûಲೂ ಫ್ರಾನ್ಸ್‍ನ ಸ್ವ್ಯಾನಿಷ್ ಪರ ವರ್ಗದ ವಿರುದ್ಧ ಸಂಪೂರ್ಣ ಜಯಗಳಿಸಿದ. 1631 ಏಪ್ರಿಲ್ 26ರಂದು ಕರಸ್ಕೊ ಒಪ್ಪಂದವಾಯಿತು. ಇದರ ಮೇರೆಗೆ ಮಾಂಟುವದಲ್ಲಿ ಫ್ರೆಂಚ್‍ಪರ ಅಭ್ಯರ್ಥಿಯನ್ನು ಅಧಿಕಾರಕ್ಕೇರಿಸಲಾಯಿತು. ಇದರಿಂದ ಇಟಲಿಯಲ್ಲಿ ಸಾಮ್ರಾಜ್ಯದ ಮತ್ತು ಸ್ಪೇನಿನ ಏಕಸ್ವಾಮ್ಯ ಮುರಿಯಿತು.

	ಸ್ವೀಡನ್ ಯುದ್ಧ ಮತ್ತು ಪ್ರೇಗ್‍ನ ಒಪ್ಪಂದ (1630-35) : ಸ್ವೀಡನ್ ಮತ್ತು ಪೋಲೆಂಡ್‍ಗಳ ನಡುವಣ ಹಗೆತನ ನಿಲುಗಡೆಗೆ ಬಂದಾಗ ಸ್ವೀಡನ್‍ನ ಗುಸ್ಟಾವಸ್ ಅಡಾಲ್ಫಸ್ ಜರ್ಮನಿಯ ಕಡೆಗೆ ಮನಹರಿಸಿದ. ಚಕ್ರವರ್ತಿಯ ನಷ್ಟಭರ್ತಿ ಶಾಸನದ ವಿರುದ್ಧ ಹೋರಾಡಲು ಪ್ರಾಟೆಸ್ಟಂಟರೆಲ್ಲ ಗುಸ್ಟಾವಸನ ನೇತೃತ್ವದಲ್ಲಿ ಒಂದಾದರು. ವಾಲೆನ್‍ಸ್ಟೈನ್ ವಶಪಡಿಸಿಕೊಂಡಿದ್ದ ಮೆಕ್‍ಲೆನ್‍ಬರ್ಗ್ ಪ್ರಾಂತ್ಯವನ್ನು ಅದರ ಡ್ಯೂಕರಿಗೆ ಗುಸ್ಟಾವಸ್ ಒಪ್ಪಿಸಿದ ಫ್ರಾನ್ಸ್‍ನೊಂದಿಗೆ ಮೈತ್ರಿ ಸಾಧಿಸಿ (1631 ಜನವರಿ 23) ತನ್ನ ಸೈನಿಕ ಕಾರ್ಯಾಚರಣೆಗಳಿಗೆ ಅದರ ನೆರವು ಗಳಿಸುವಲ್ಲಿ ಸಫಲನಾದ. ಚಕ್ರವರ್ತಿ ವಾಲೆನ್‍ಸ್ಟೈನ್‍ನನ್ನು ಪ್ರಧಾನ ದಂಡ ನಾಯಕತ್ವದಿಂದ ತೆಗೆದುಹಾಕಿ ಅವನ ಸ್ಥಾನದಲ್ಲಿ ಟಿಲ್ಲಿಯನ್ನು ನೇಮಿಸಿದ. ಗುಸ್ಟಾವಸ್ ಟಿಲ್ಲಿಯ ಸೈನ್ಯವನ್ನು 1631 ಸೆಪ್ಟೆಂಬರ್‍ನಲ್ಲಿ ಬ್ರೈಟ್ ಫೀಲ್ಡ್ ಕದನದಲ್ಲಿ ಸೋಲಿಸಿದ. 1632ರಲ್ಲಿ ಅವನು ಫ್ರಾಂಕ್‍ಫರ್ಟ್, ಮೈನ್ಜ, ನ್ಯೂರೇನ್‍ಬರ್ಗ್ ಮತ್ತು ಡೀನ್‍ವರ್ಕ್ ಪ್ರದೇಶಗಳನ್ನು ವಶಪಡಿಸಿಕೊಂಡ.

	ಮುಂದೆ ಟಿಲ್ಲಿಯ ಕೊಲೆಯಾಯಿತು. ಈ ಸಂದರ್ಭದ ಅನುಕೂಲ ಪಡೆದುಕೊಂಡ ಗುಸ್ಟಾವಸ್ ಬವೇರಿಯ, ಮ್ಯೂನಿಚ್ ಮತ್ತು ಬೊಹಿಮಿಯಗಳನ್ನು ವಶಪಡಿಸಿಕೊಂಡ. ಪಲ್ಯಾಟಿನೇಟ್‍ನ ಫ್ರೆಡ್ರಿಕ್‍ನನ್ನು ಪ್ರೇಗ್‍ನಲ್ಲಿ ದೊರೆಯೆಂದು ಘೋಷಿಸಿದ. ಚಕ್ರವರ್ತಿ ಫರ್ಡಿನ್ಯಾಂಡ್ ವಾಲೆನ್‍ಸ್ಟೈನ್‍ನನ್ನು ಮತ್ತೆ ಮುಖ್ಯ ಸೇನಾಧಿಪತಿಯಾಗಿ ನೇಮಿಸಿದ. 1632ರಲ್ಲಿ ನಡೆದ ಲುಟ್ಜೆನ್ ಕದನದಲ್ಲಿ ವಾಲೆನ್‍ಸ್ಟೈನನು ಗುಸ್ಟಾವಸನಿಗೆ ಸೋತುಹೋದ. ಆದರೆ ಈ ಯುದ್ಧದಲ್ಲಿ ಗುಸ್ಟಾವಸ್ ಕೊಲೆಗೀಡಾದ. ಆದಾದ ಎರಡು ವರ್ಷಗಳ ಅನಂತರ ವಾಲೆನ್‍ಸ್ಟೈನ್ ಚಕ್ರವರ್ತಿಯ ಕಡೆಯವರಿಂದಲೇ ಕೊಲೆಗೀಡಾದ. ಅದೇ ವರ್ಷ ನಡೆದ ನಾರ್ಟಲಿನನ್ ಕದನದಲ್ಲಿ ಸ್ವೀಡಿಷ್ ಸೈನ್ಯ ಸೋತಿತು. ಪ್ರಾಟೆಸ್ಟಂಟರ ಲೀಗ್ ಒಡೆದು ಹೋಯಿತು.

	ಪ್ರೇಗ್‍ನಲ್ಲಿ ನಡೆದ ಶಾಂತಿ ಒಪ್ಪಂದ (1635 ಮೇ 30) ರಾಜೀಸೂತ್ರವನ್ನು ಅಂಗೀಕರಿಸಿತು. ಇದರ ಮೇರೆಗೆ ಕ್ಯಾತೊಲಿಕ್‍ರ ಆಸ್ತಿಯನ್ನು ಮರುಪಡೆಯುವ ಕಾಲವನ್ನು 1552ರ ಬದಲಿಗೆ 1627ರಿಂದೀಚೆಗೆ ಎಂದು ನಿಗದಿಪಡಿಸಲಾಯಿತು. ಸ್ವೀಡನ್ ಈ ಮೂವತ್ತು ವರ್ಷಗಳ ಯುದ್ಧ ಸರಣಿಯಲ್ಲಿ ಹಿಂದಿನ ಸಾಲಿಗೆ ಸರಿಯಿತು.

	ಫ್ರಾನ್ಸ್‍ನ ಪ್ರವೇಶ (1635-48) : ಅಡಾಲ್ಫಸ್ ಗುಸ್ಟಾವಸನ ನಿಧನಾ ನಂತರ ಜರ್ಮನಿಯಲ್ಲಿ ಸ್ವೀಡನ್ ಪ್ರಭಾವಪೂರ್ಣವಾಗಿ ಕುಸಿಯಿತು. ಈ ಸಂದರ್ಭದಲ್ಲಿ ಪ್ರಾಟೆಸ್ಟಂಟ್ ರಾಜ್ಯವಲ್ಲದಿದ್ದರೂ ಚಕ್ರವರ್ತಿ ಪ್ರಬಲನಾಗುವುದನ್ನು ಬಯಸದ ಫ್ರಾನ್ಸ್ ಮಧ್ಯ ಪ್ರವೇಶಿಸಿತು. ಫ್ರಾನ್ಸಿನ ರಿಸೆûಲೂ 1635ರಲ್ಲಿ ಸಂಯುಕ್ತ ಪ್ರಾಂತ್ಯಗಳೊಡನೆ ಮತ್ತು ಸ್ವೀಡನ್ನಿನೊಡನೆ ರಕ್ಷಣಾತ್ಮಕ ಮೈತ್ರಿ ಒಪ್ಪಂದ ಮಾಡಿಕೊಂಡ. ಅದೇ ವರ್ಷ ವಾಲ್ಟೆಲೀನಾಕ್ಕೆ ಫ್ರೆಂಚ್ ಸೈನ್ಯವನ್ನು ಕಳುಹಿಸಿ ಸ್ಪೇನ್ ಮೇಲೆ ಯುದ್ಧ ಘೋಷಿಸಿದ. ಸವಾವ್ ಮತ್ತು ಪಾರ್ಮಗಳೊಂದಿಗೆ ಮೈತ್ರಿ ಏರ್ಪಟ್ಟಿತು.

	ಜರ್ಮನಿ ಐರೋಪ್ಯ ಸೈನ್ಯದ ಆಟದ ಮೈದಾನವಾಯಿತು. ಫ್ರೆಂಚ್, ಸ್ವೀಡಿಷ್ ಬವೇರಿಯನ್ ಮತ್ತು ಸಾಮ್ರಾಜ್ಯದ ಸೇನಾಧಿಪತಿಗಳು ತಮ್ಮ ಸ್ವಂತ ಜವಾಬ್ದಾರಿಯ ಮೇಲೆ ಯುದ್ಧ ಮಾಡಿದರು. ಈ ಕಾರ್ಯಚರಣೆಗಳಲ್ಲಿ ಯಾವುದೇ ಸಂಗತವಾದ ಯೋಜನೆ ಇರಲಿಲ್ಲ. ಅದರಲ್ಲಿ ಗುರುತಿಸಬಹುದಾದ ಘಟನೆಗಳೆಂದರೆ ಬ್ರೈಟನ್ ಫೀಲ್ಡ್‍ನಲ್ಲಿ ಸ್ಯಾಕ್ಸನ್ನರ ಮೇಲೆ ಸ್ವೀಡನ್ನಿನವರು ಗಳಿಸಿದ ಗೆಲವು ಮತ್ತು ಸ್ವೀಡನ್ನರು ಪ್ರೇಗ್ ನಗರದ ಒಂದುಭಾಗವನ್ನು ವಶಪಡಿಸಿಕೊಂಡದ್ದು. 1642 ನವೆಂಬರ್ 2ರಂದು ಸ್ವೀಡಿಷ್ ಸೈನ್ಯ ಟಾರ್ಟೆನ್‍ಸನ್ ನಾಯಕತ್ವದಲ್ಲಿ ರೋಮನ್ ಸಾಮ್ರಾಜ್ಯದ ಸೈನ್ಯವನ್ನು ಸೋಲಿಸಿತು.

	ಫ್ರಾನ್ಸ್‍ನ ಸೈನ್ಯ ನೆದರ್‍ಲ್ಯಾಂಡ್ಸ್, ಅಲ್ಸೇಸ್, ಇಟಲಿ ಮತ್ತು ಪಿರನೀಸ್‍ಗಳಲ್ಲಿ ಸಾಮ್ರಾಜ್ಯ ಸೈನ್ಯದ ವಿರುದ್ಧ ಹೋರಾಡಿತು. ಅದು ರೈನ್ ಪ್ರದೇಶವನ್ನು ವಶಪಡಿಸಿಕೊಂಡು ಸ್ಪೇನ್ ಮತ್ತು ಆಸ್ಟ್ರಿಯಾಗಳ ನಡುವಣ ಸಂಪರ್ಕವನ್ನು ಕಡಿದುಹಾಕಿತು. ಫ್ರಾನ್ಸ್‍ನ ಪ್ರಧಾನ ಮಂತ್ರಿ ರಿಸೆûಲೂ 1642ರಲ್ಲಿ ನಿಧನನಾದ. ತರುವಾಯ ಪ್ರಧಾನ ಮಂತ್ರಿ ಸ್ಥಾನಕ್ಕೆ ಬಂದ ಪುಜರೀನ್ ರಾಜ ಹದಿನಾಲ್ಕನೆಯ ಲೂಯಿಯ ರಾಜಪ್ರತಿನಿಧಿಯಾಗಿದ್ದು ಹಿಂದಿನ ಕಾರ್ಯನೀತಿಯನ್ನೇ ಮುಂದುವರಿಸಿಕೊಂಡು ಬಂದ. ಫ್ರೆಂಚರು ಸ್ಪೇನಿನವರಿಂದ ಭಾರಿ ಹೋರಾಟಗಳನ್ನೆದುರಿಸಿದರೂ ಅಂತಿಮವಾಗಿ ವಿಜಯಗಳಿಸಿದರು. ಕಾಂಡೆ ಮತ್ತು ಟೈರೆನ್ ಎಂಬ ಇಬ್ಬರು ಫ್ರೆಂಚ್‍ಸೇನಾಧಿಪತಿಗಳು ಈ ಯಶಸ್ಸಿಗೆ ಕಾರಣರಾಗಿದ್ದರು. 1648ರಲ್ಲಿ ಟೈರನ್ ಬವೇರಿಯಾವನ್ನು ಆಕ್ರಮಿಸಿ ಕ್ಯಾತೊಲಿಕ್ ಸೈನ್ಯವನ್ನು ನಾಶಮಾಡಿದ.

	ಸ್ವೀಡಿಷ್-ಡೇನಿಷ್ ಯುದ್ಧ (1643-45) : ಸ್ವೀಡನ್ ಈ ಯುದ್ಧದಲ್ಲಿ ಕೊನೆಯ ತನಕ ಹೋರಾಟದಲ್ಲಿತ್ತು. ಸ್ವೀಡಿಷ್ ಪಡೆ ಡೆನ್ಮಾರ್ಕಿನೊಳಗೆ ಬಿರುಸಿನಿಂದ ಮುನ್ನುಗ್ಗಿ ಪ್ಲೇಸ್‍ವಿಗ್, ಹೋಲ್‍ಸ್ಟೈನ್ ಮತ್ತು ಜುಟ್‍ಲ್ಯಾಂಡ್‍ಗಳನ್ನು ಆಕ್ರಮಿಸಿತು. ಸಾಮ್ರಾಜ್ಯದ ಸೈನ್ಯ ಡೇನರ ನೆರವಿಗೆ ಬಂದರೂ ಸ್ವೀಡಿಷ್ ಸೈನ್ಯದ ಕೈಯಲ್ಲಿ ಜುಟರ್‍ಬೋಗ್ ಬಳಿ 1644 ನವೆಂಬರ್ 23ರಂದು ಡೇನಿಷ್ ಸೈನ್ಯ ಪೂರ್ಣವಾಗಿ ಸೋತುಹೋಯಿತು. 1645 ಆಗಸ್ಟ್ 23ರಂದು ಸಹಿ ಮಾಡಲಾದ ಬ್ರಾಮ್ಸಬ್ರೂ ಶಾಂತಿ ಒಪ್ಪಂದದ ಪ್ರಕಾರ ಡೆನ್ಮಾರ್ಕ್ ಮತ್ತು ಹಾಲಂಡ್‍ಗಳು ಕೆಲವು ಪ್ರದೇಶಗಳನ್ನು ಸ್ವೀಡನ್‍ಗೆ ಬಿಟ್ಟು ಕೊಟ್ಟವು.

	ವೆಸ್ಟ್‍ಫಾಲಿಯ ಒಪ್ಪಂದ (1648) : ನೆದರ್‍ಲ್ಯಾಂಡ್ಸ್‍ನಲ್ಲಿ ಸ್ಪೇನ್ ಮತ್ತು ಸಂಯುಕ್ತ ಸಂಸ್ಥಾನಗಳ ನಡುವೆ ನಡೆದಿದ್ದ ಎಂಬತ್ತು ವರ್ಷಗಳ ಯುದ್ಧಕ್ಕೆ ಹಾಗೂ ಫ್ರಾನ್ಸ್, ಸ್ವೀಡನ್ ಮತ್ತು ಜರ್ಮನ್ ಪ್ರಾಟೆಸ್ಟಂಟರು ಒಂದು ಕಡೆ: ಮತ್ತು ಚಕ್ರವರ್ತಿ ಮತ್ತು ಜರ್ಮನ್ ಕ್ಯಾತೊಲಿಕ್ ರಾಜರು ಇನ್ನೊಂದು ಕಡೆ ನಿಂತು ನಡೆಸಿದ ಯುದ್ಧಗಳಿಗೆ ತೆರೆ ಎಳೆಯಲು 1640ರಿಂದ ತೀವ್ರ ಸಂಧಾನಗಳು ನಡೆಯತೊಡಗಿದುವು.  ಅಂದಿನ ಪರಿಸ್ಥಿತಿಯ ಮೇಲೆ ಹತೋಟಿ ಪಡೆದಿದ್ದ ಸ್ವೀಡನ್ ಮತ್ತು ಫ್ರಾನ್ಸ್‍ಗಳು ಶಾಂತಿ ಸಮ್ಮೇಳನಕ್ಕೆ ಮೊದಲು ಕರೆ ನೀಡಿದುವು. ಸಮ್ಮೇಳನದಲ್ಲಿ 150 ಜನ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಸಮ್ಮೇಳನ ವೆಸ್ಟ್‍ಫಾಲೀಯದ ಪಟ್ಟಣಗಳಾದ ಮೂಸ್ಟರ್ ಮತ್ತು ಆಸ್ನಬ್ರೂಕ್‍ನಲ್ಲಿ ನಡೆದು 1648 ಅಕ್ಟೋಬರ್ 24ರಂದು ಒಪ್ಪಂದಕ್ಕೆ ಸಹಿ ಮಾಡಲಾಯಿತು.

	ವೆಸ್ಟ್‍ಫಾಲೀಯ ಒಪ್ಪಂದದ ಮೇರೆಗೆ ಪ್ರತಿಯೊಬ್ಬ ರಾಜನೂ ತನ್ನ ರಾಜ್ಯದಲ್ಲಿ ತನಗೆ ಬೇಕಾದ ಧರ್ಮವನ್ನು ಅನುಸರಿಸಲು ಹಕ್ಕು ಪಡೆದ. ಲೂಥರನ ಪಂಥದವರಂತೆ ಕ್ಯಾಲ್ವಿನ್ ಪಂಥದವರೂ ಸಮಾನ ಧಾರ್ಮಿಕ ಹಕ್ಕುಗಳನ್ನು ಪಡೆದುಕೊಂಡರು. ಚರ್ಚಿನ ಆಸ್ತಿಪಾಸ್ತಿಗಳನ್ನು 1624ಕ್ಕೂ ಮೊದಲೇ ಹೊಂದಿದ್ದವರೆಲ್ಲ ಅದನ್ನು ಅವರೇ ಇಟ್ಟುಕೊಳ್ಳುವಂತಾಯಿತು. ಸಾಮ್ರಾಜ್ಯದ ನ್ಯಾಯಾಲಯಗಳಲ್ಲಿ ಕ್ಯಾತೊಲಿಕರು ಮತ್ತು ಪ್ರಾಟೆಸ್ಟಂಟರು ಸಮಾನ ಪ್ರಾತಿನಿಧ್ಯ ಪಡೆದರು.

	ರಾಜಕೀಯವಾಗಿ ಸಾಮ್ರಾಜ್ಯಾಧಿಪತಿಗಳಾಗಿದ್ದ ಹ್ಯಾಬ್ಸ್‍ಬರ್ಗ್ ಮನೆತನದ ಆಡಳಿತ ವ್ಯಾಪ್ತಿ ಕುಗ್ಗಿತು. ಫ್ರಾನ್ಸ್, ಸ್ವೀಡನ್ ಮತ್ತು ಅವರ ಮೈತ್ರಿಕೂಟಕ್ಕೆ ಹೆಚ್ಚಿನ ಪ್ರಾದೇಶಿಕ ಲಾಭಗಳಾದುವು. ಜರ್ಮನಿ ಸ್ವತಂತ್ರವಾಯಿತು. ಬ್ರಂಡನ್ ಬರ್ಗ್, ಬವೇರಿಯ ಮತ್ತು ಸ್ಯಾಕ್ಸೊನಿಗಳು ಅಲ್ಪಸ್ವಲ್ಪ ಲಾಭದಿಂದ ತೃಪ್ತಿ ಪಡಬೇಕಾಯಿತು. ನೆದರ್‍ಲ್ಯಾಂಡ್ಸನ ಸಂಯುಕ್ತ ಪ್ರಾಂತ್ಯಗಳು ಮತ್ತು ಸ್ವಿಸ್ ರಾಜ್ಯ ಸ್ವತಂತ್ರ ಗಣರಾಜ್ಯಗಳಾದುವು. ಈ ಒಪ್ಪಂದದಿಂದಾಗಿ ಸಾಮ್ರಾಜ್ಯದ ಸದಸ್ಯರಿಗೆ ಪೂರ್ಣ ಪ್ರಮಾಣದ ಸಾರ್ವಭೌಮಾಧಿಕಾರ ದೊರೆಯಿತು. ಯುದ್ಧ ಮತ್ತು ಶಾಂತಿ ಒಪ್ಪಂದ ಮಾಡಿಕೊಳ್ಳಲು ಸಾಮ್ರಾಜ್ಯದ ಡಯಟ್ ಸಭೆಯ ತೀರ್ಮಾನಗಳಿಗೆ ಚಕ್ರವರ್ತಿ ಬದ್ಧನಾಗಬೇಕಾಯಿತು. ನಷ್ಟಭರ್ತಿಶಾಸನವನ್ನು ರದ್ದು ಪಡಿಸಲಾಯಿತು. ಯುರೋಪಿನ ಇತಿಹಾಸದಲ್ಲಿ ವೆಸ್ಟ್‍ಫಾಲೀಯ ಒಪ್ಪಂದ ಬಲು ಮಹತ್ವವುಳ್ಳದ್ದು. ಇದರಿಂದ ಧರ್ಮಯುದ್ಧಗಳು ನಿಂತವು. ಚಕ್ರವರ್ತಿ ಮತ್ತು ಪೋಪನ ಅಧಿಕಾರ ಮೊಟಕಾಯಿತು. ಸಂಧಾನಗಳ ಮೂಲಕ ಸಮಸ್ಯೆಗಳನ್ನೂ ಬಗೆಹರಿಸುವ ಪದ್ಧತಿ ಬೆಳೆಯಿತು. ಪ್ರಾದೇಶಿಕ ಸಾರ್ವಭೌಮತ್ವಕ್ಕೆ, ಧಾರ್ಮಿಕ ಸಮಾನತೆಗೆ, ಆಂತರಿಕ ಸ್ವಾತಂತ್ರ್ಯಕ್ಕೆ ಮಾನ್ಯತೆ ನೀಡಲಾಯಿತು.									
	(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ